ರವಿವರ್ಮ 1 - 

 	ಆದ್ಯ ಕದಂಬ ವಂಶದ ರಾಜ (ಸು.485-519) ಮೃಗೇಶವರ್ಮನ ಮಗ. ತಂದೆ ಮರಣ ಹೊಂದಿದ ಸಮಯದಲ್ಲಿ ಪ್ರಾಯಶಃ ಇವನು ಇನ್ನೂ ಅಪ್ರಾಪ್ತ ವಯಸ್ಕನಾಗಿದ್ದುದರಿಂದ, ಇವನ ಚಿಕ್ಕಪ್ಪ ಮಾಂಧಾವೃತವರ್ಮ ಬನವಾಸಿಯಲ್ಲಿ ರಾಜ್ಯವಾಳಲಾರಂಭಿಸಿದ. ಆತನ ಮರಣಾನಂತರ ರವಿವರ್ಮ ಸಿಂಹಾಸನವನ್ನು ಪಡೆದ. ಇವನು ವಿಷ್ಣುವರ್ಮನನ್ನು ಸೋಲಿಸಿದನೆಂದೂ ಕಾಂಚೀಪತಿ ಚಂಡದಂಡನನ್ನು ಕೊಂದನೆಂದೂ ಶಾಸನಗಳು ತಿಳಿಸುತ್ತವೆ. ವಿಷ್ಣುವರ್ಮ ರವಿವರ್ಮನ ಜ್ಞಾತಿ, ತ್ರಿಪರ್ವತ ಕದಂಬ ಶಾಖೆಗೆ ಸೇರಿದವನಿರಬಹುದು. ರವಿವರ್ಮನ ಕಾಲದಲ್ಲಿ ಕದಂಬ ರಾಜ್ಯ ನರ್ಮದಾ ನದಿಯವರೆಗೂ ಹಬ್ಬಿದ್ದಿತೆಂಬ ಹೇಳಿಕೆ ಇದ್ದರೂ ಇದು ಉತ್ಪ್ರೇಕ್ಷೆಯೆಂದು ತೋರುತ್ತದೆ. ಈತನ ಕಾಲದಲ್ಲಿ ಪಲಾಶಿಕಾ (ಬೆಳಗಾಂವಿ ಜಿಲ್ಲೆಯ ಹಲಶಿ), ಉಚ್ಛಶೃಂಗಿ (ಬಳ್ಳಾರಿ ಜಿಲ್ಲೆಯ ಉಚ್ಚಂಗಿ) ಸಹ ಉಪರಾಜಧಾನಿಗಳಾಗಿದ್ದವು. ಈತನ ಸಹೋದರರಾಗಿದ್ದ ಭಾನುವರ್ಮ ಮತ್ತು ಶಿವರಥ ಕ್ರಮವಾಗಿ ಹಲಶಿಯಲ್ಲಿ ಹಾಗೂ ಉಚ್ಚಂಗಿಯಲ್ಲಿ ಪ್ರಾಂತ್ಯಾಧಿಕಾರಿಗಳಾಗಿದ್ದರು. ರವಿವರ್ಮನ ಸು. 35 ವರ್ಷಗಳ ದೀರ್ಘ ಆಳ್ವಿಕೆಯ ಅನಂತರ ಇವನ ಮಗ ಹರಿವರ್ಮ ಪಟ್ಟವೇರಿದ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ